ಹರೇ ಕೃಷ್ಣ ಮಹಾಮಂತ್ರ

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

ವೀಕ್ಷಕರ ಸ್ಥಳ

 

January 2012
M T W T F S S
« Jul    
 1
2345678
9101112131415
16171819202122
23242526272829
3031  

ಜ್ಞಾನಾಮೃತ ಬಿಂದು

ಭಕ್ತಿಪೂರ್ವಕ ಸೇವೆಯ ಮಾರ್ಗವನ್ನು ಸ್ವೀಕರಿಸುವವನು ವೇದಾಧ್ಯಯನ, ಯಜ್ಞಗಳ ಆಚರಣೆ, ದಾನ ಮಾಡುವುದು ಅಥವಾ ತಾತ್ವಿಕ ಮತ್ತು ಕಾಮ್ಯಕರ್ಮಗಳಿಂದ ಬರುವ ಫಲಗಳನ್ನು ಕಳೆದುಕೊಳ್ಳಬೇಕಾಗಿಲ್ಲ. ಭಕ್ತಿಸೇವೆ ಮಾಡಿದರೆ ಸಾಕು, ಆತನು ಇವೆಲ್ಲವನ್ನೂ ಪಡೆಯುತ್ತಾನೆ ಮತ್ತು ಕಡೆಯಲ್ಲಿ ಪರಮ ಶಾಶ್ವತ ನಿವಾಸವನ್ನು ಸೇರುತ್ತಾನೆ. - ಭಗವದ್ಗೀತೆ 8.28

ಮಾನವ ಜನ್ಮ ಬಲು ದೊಡ್ಡದು

ಮಾನವ ಜನ್ಮ ಬಲು ದೊಡ್ಡದೊ ಅದ ಹಾನಿಮಾಡಲುಬೇಡಿ ಹುಚ್ಚಪ್ಪಗಳಿರಾ

ಕಣ್ಣು ಕೈಕಾಲುಕಿವಿ ಇರಲಿಕ್ಕೆ ಮಣ್ಣುಮುಕ್ಕಿ ಹುಚ್ಚರಾಗುವರೆ
ಹೆಣ್ಣುಮಣ್ಣಿಗಾಗಿ ಹರಿಯನಾಮಾಮೃತವ ಉಣ್ಣದೆ ಉಪವಾಸ ಇರುವರೆ ಖೋಡಿ

ಕಾಲನ ದೂತರು ಕಾಲ್ದಿಡಿದೆಳೆವಾಗ ತಾಳುತಾಳೆಂದರೆ ತಾಳುವರೆ
ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ ಹಾಳುಸಂಸಾರದ ಸುಳಿಗೆ ಸಿಕ್ಕಲು ಬೇಡಿ

ಏನು ಕಾರಣ ಯದುಪತಿಯನ್ನು ಮರೆತಿರಿ ಧನಧಾನ್ಯ ಮಕ್ಕಳು ಸಲಹುವರೇ
ಇನ್ನಾದರೂ ಏಕೋಭಾವದಿ ಭಜಿಸಿರೋ ಚಿನ್ನ ಶ್ರೀ ಪುರಂದರ ವಿಠ್ಠಲರಾಯನ

- ಶ್ರೀ ಪುರಂದರ ದಾಸ

ಭವಸಾಗರವನ್ನು ದಾಟಲು ಸಹಾಯಕವಾದ ನೌಕೆ

ಏತಧ್ಯಾತುರ ಚಿತ್ತಾನಾಂ ಮಾತ್ರಾಸ್ಪರ್ಷೇಚ್ಛಯಾ ಮುಹುಃ
ಭವಸಿಂಧು ಪ್ಲವೋ ದೃಷ್ಟೋ ಹರಿಚರ್ಯಾನುವರ್ಣನಂ

” ವಿಷಯ ಸುಖಾಪೇಕ್ಷೆಯಿಂದ ಸದಾ ಕಾತರ ಕಳವಳಗಳಿಗೆ ಸಿಕ್ಕವರು ದುಃಖಮಯವಾದ ಭವಸಾಗರವನ್ನು ಪರಮ ದೇವೋತ್ತಮ ಪುರುಷನಾದ ಶ್ರೀ ಕೃಷ್ಣನ ದಿವ್ಯ ಲೀಲೆಗಳ ವರ್ಣಣೆಯ ನೌಕೆಯ ಸಹಾಯದಿಂದ ದಾಟಬಹುದು”.

ಶ್ರೀಮದ್ ಭಾಗವತ 1.6.34

ಜೀವನದ ಪರಿಪೂರ್ಣತೆ

ನಾರದ ಉವಾಚ
ತಜ್ಜನ್ಮ ತಾನಿ ಕರ್ಮಾಣಿ
ತದ್ ಆಯುಸ್ತನ್ಮನೋವಚಹ
ನೃನಾಮ್ ಏನ ಹಿ ವಿಶ್ವಾತ್ಮಾ
ಸೇವ್ಯತೆ ಹರಿರ್ ಈಶ್ವರಃ

ಮಹರ್ಷಿ ನಾರದರು ಹೇಳಿದರು: ಒಬ್ಬ ಜೀವಿಯು ಸರ್ವೋತ್ತಮ ನಿಯಂತ್ರಕನಾದ ಪರಮ ದೇವೋತ್ತಮ ಪುರುಷನ (ಶ್ರೀ ಕೃಷ್ಣನ) ಭಕ್ತಿಸೇವೆಯಲ್ಲಿ ತೊಡಗಿದಾಗ, ಅವನ ಜನ್ಮ, ಕಾರ್ಯಗಳು, ಆಯುಷ್ಯ, ಮನಸ್ಸು ಮತ್ತು ಶಬ್ದಗಳು ವಾಸ್ತವವಾಗಿ ಪರಿಪೂರ್ಣವಾಗುತ್ತವೆ.

ಶ್ರೀಮದ್ ಭಾಗವತ : 4.31.9

ಇಸ್ಕಾನ್ ಶ್ರೀ ಜಗನ್ನಾಥ ಮಂದಿರ ತಮ್ಮೆಲ್ಲರನ್ನು ಭಾನುವಾರದ ಔತಣಕೂಟಕ್ಕೆ ಆಹ್ವಾನಿಸುತ್ತದೆ

ದೇವರು ಯಾರು? ನಾನು ಯಾರು? ನಾನು ಈ ಜಗತ್ತಿಗೆ ಬಂದ ಕಾರಣವೇನು? ನನ್ನ ಜೀವನದ ಗುರಿ ಏನು? ದೇವರೊಡನೆ ನನಗಿರುವ ಸಂಬಂಧವೇನು?
ವಿಶಾಲ ಮತ್ತು ಅದ್ಭುತವಾದ ಈ ಪ್ರಕೃತಿ ಯಾರಿಂದ ಮತ್ತು ಹೇಗೆ ಬಂತು? ಹಿಂದೂ ಧರ್ಮದ ಪ್ರಮುಖ ಗ್ರಂಥವಾದ ಭಗವದ್ಗೀತೆಯ ಸಂದೇಶವೇನು?

ಒಬ್ಬ ವಿಚಾರವಂತ ಮನುಷ್ಯನಿಗೆ ಈ ತರಹದ ಪ್ರಶ್ನೆಗಳು ಸ್ವಾಭಾವಿಕ. ಆದರೆ ಎಲ್ಲೆಡೆ ಬರೀ ನಾಸ್ತಿಕತೆ ಮತ್ತು ಕೃತಕ ಜೀವನಶೈಲಿಯನ್ನು ಕಂಡು, ಈ ಬಗ್ಗೆ ಇನ್ನೊಬ್ಬರೊಡನೆ ಮಾತನಾಡಿದರೆ ಎಲ್ಲಿ ಜನರು ನಕ್ಕುಬಿಡುತ್ತಾರೋ ಎಂಬ ಭಯದಿಂದ ಈ ಪ್ರಶ್ನೆಗಳು ಅವನಲ್ಲಿಯೇ ಉಳಿದುಬಿಡುತ್ತವೆ.

ಭಾರತದ ಶ್ರೀಮಂತ ಸಂಕೃತಿಯ ಕೊಡುಗೆಯಾದ ಶ್ರೀಮದ್ ಭಗವದ್ಗೀತೆ, ಶ್ರೀಮದ್ ಭಾಗವತ ಪುರಾಣ, ಉಪನಿಷತ್ತುಗಳು ಇತ್ಯಾದಿ ವೈದಿಕ ಗ್ರಂಥಗಳು ಮೇಲಿನ ಪ್ರಶ್ನೆಗಳಿಗೆ ಸಂಪೂರ್ಣ ಉತ್ತರಗಳನ್ನು ನೀಡುತ್ತವೆ.

ಇಂದಿನ ತಾಂತ್ರಿಕ ಯುಗದಲ್ಲಿ, ಜನರು ತಮ್ಮ ವ್ಯಸ್ತ ಜೀವನದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದನ್ನೇ ಮರೆತಿದ್ದಾರೆ. ನಾಸ್ತಿಕತೆ, ಮೋಸ, ಕಪಟ, ಭ್ರಷ್ಟಾಚಾರ ಇತ್ಯಾದಿ ಎಲ್ಲೆಡೆ ತಾಂಡವವಾಡುತ್ತಿವೆ. ಹಲವು ವರ್ಷಗಳ ಹಿಂದಿದ್ದ ವೈಯಕ್ತಿಕ ಮತ್ತು ಸಾಮಾಜಿಕ ಶಾಂತಿ, ನೆಮ್ಮದಿ, ಸೌಹಾರ್ದತೆ ಇಂದಿಲ್ಲ.

ಇಂದಿನ ಕೃತಕ ಜೀವನದ ಕೆಲವು ವಿಪರ್ಯಾಸ ಸತ್ಯಗಳು…

ರಸ್ತೆಗಳು ಅಗಲವಾಗುತ್ತಿವೆ, ಮನಸ್ಸುಗಳು ಚಿಕ್ಕವಾಗುತ್ತಿವೆ.

ಕಟ್ಟಡಗಳು ಮೇಲೇರುತ್ತಿವೆ, ಮೌಲ್ಯಗಳು ಕುಸಿಯುತ್ತಿವೆ.

ದೂರ ಕಡಿಮೆಯಾಗುತ್ತಿದೆ, “ಅಂತರ” ಹೆಚ್ಚಾಗುತ್ತಿದೆ.

ಮನೆಗಳು ದೊಡ್ದದಾಗುತ್ತಿವೆ, ಕುಟುಂಬಗಳು ಚಿಕ್ಕದಾಗುತ್ತಿವೆ.

ಜೀವನಕ್ಕೆ ವರ್ಷಗಳು ತುಂಬುತ್ತಿವೆ, ಆದರೆ ವರ್ಷಗಳಿಗೆ ಜೀವ ತುಂಬುತ್ತಿಲ್ಲ.

ಊರೆಲ್ಲಾ ದೀಪಗಳಿಂದ ಜಗಮಗಿಸುತ್ತಿದೆ, ಆದರೆ ಅಂತರಾಳದಲ್ಲಿ ಕತ್ತಲೆಯಾಗಿದೆ.

ಈ ಎಲ್ಲ ಸಮಸ್ಯಗಳ ಮೂಲ ಆಧ್ಯಾತ್ಮಿಕ ಮನೋವೃತ್ತಿ ಮತ್ತು ಆಚರಣೆಗಳ ಕೊರತೆ.

ಆಧ್ಯಾತ್ಮಿಕ ಹಸಿವಿನಿಂದ ಬಳಲುತ್ತಿರುವ ಇಂದಿನ ಸಮಾಜಕ್ಕೆ ಮನುಷ್ಯ ಜೀವನದ ನಿಜವಾದ ಗುರಿಯತ್ತ ಸನ್ಮಾರ್ಗ ತೋರಲು ಶ್ರೀಲ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಸ್ಥೆ (ಇಸ್ಕಾನ್) ಯನ್ನು ಪ್ರಾರಂಭಿಸಿದರು. ದೇಶ, ಜಾತಿ, ಮತ, ಧರ್ಮ ಇತ್ಯಾದಿಗಳ ಪಕ್ಷಪಾತ ಮಾಡದೆ ಅವರು ಎಲ್ಲರನ್ನು ಭಗವದ್ಭಕ್ತಿಯಲ್ಲಿ ತೊಡಗಲು ಪ್ರೇರೇಪಿಸಿದರು. ಜಗತ್ತಿನ ಮೂಲೆಮೂಲೆಗೆ ಸಂಚರಿಸಿ ಸನಾತನ ಧರ್ಮದ ತತ್ತ್ವಗಳನ್ನು ಬೋಧಿಸಿದರು.ನಮ್ಮೆಲ್ಲರ ಮಾರ್ಗದರ್ಶನಕ್ಕೆಂದು 80 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದರು. ಇಡೀ ವಿಶ್ವದ ಜನರು ಇರಬಹುದಾದ ಒಂದು ಮನೆ (ಇಸ್ಕಾನ್) ಯನ್ನು ಕಟ್ಟಿದರು.

ಶ್ರೀಲ ಪ್ರಭುಪಾದರು ಆದೇಶಿಸಿದಂತೆ ಇಸ್ಕಾನ್ ಭಕ್ತರು ಈಗಲೂ ವಿಶ್ವದಾದ್ಯಂತ ಶ್ರೀಮದ್ ಭಗವದ್ಗೀತೆ ಮತ್ತು ಇತರ ವೈದಿಕ ಗ್ರಂಥಗಳ ದಿವ್ಯಜ್ಞಾನವನ್ನು ಪ್ರಚಾರ ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಇಸ್ಕಾನ್, ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಒಂದು ಶಾಖೆಯನ್ನು ಸ್ಥಾಪಿಸಿದೆ. ಬೆಂಗಳೂರಿನ ಜನರಿಗಾಗಿ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಇಸ್ಕಾನ್ ಶೇಷಾದ್ರಿಪುರಂ ಶಾಖೆಯು ಪ್ರತಿ ಭಾನುವಾರ “ಔತಣಕೂಟ” ವನ್ನು ಆಯೋಜಿಸುತ್ತದೆ. ಹರಿನಾಮ ಸಂಕೀರ್ತನೆ, ಪ್ರವಚನ, ಪ್ರಶ್ನೋತ್ತರಗಳು ಮತ್ತು ಭೋಜನ ಪ್ರಸಾದವನ್ನೊಳಗೊಂಡ ಈ ವಿಶೇಷ ಕಾರ್ಯಕ್ರಮಕ್ಕೆ ಎಲ್ಲರಿಗೂ ಸುಸ್ವಾಗತ.

ಸಮಯ: ಪ್ರತಿ ಭಾನುವಾರ ಬೆಳಿಗ್ಗೆ 7.15 ರಿಂದ 10.00 ರವರೆಗೆ ಮತ್ತು
ಸಂಜೆ 5.30 ರಿಂದ 7.30 ರವರೆಗೆ.

ವಿಳಾಸ:
ಇಸ್ಕಾನ್ ಶ್ರೀ ಜಗನ್ನಾಥ ಮಂದಿರ
ನಂ.5, ಶ್ರೀಪುರಂ,
1ನೇ ಅಡ್ಡರಸ್ತೆ, ಶೇಷಾದ್ರಿಪುರಂ,
ಬೆಂಗಳೂರು – 560020.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 080-23565708

ಕಲಿಯುಗದ ಯುಗಧರ್ಮ – ಹರಿನಾಮ ಸಂಕೀರ್ತನೆ

ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಮ್
ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್ ಅನ್ಯಥಾ

“ಕಲಹ ಮತ್ತು ಕಪಟಗಳಿಂದ ತುಂಬಿದ ಈ ಕಲಿಯುಗದಲ್ಲಿ ಭಗವತ್ಪ್ರಾಪ್ತಿಗೆ ಹರಿನಾಮವೊಂದೇ ಮಾರ್ಗ, ಹರಿನಾಮವೊಂದೇ ಮಾರ್ಗ, ಹರಿನಾಮವೊಂದೇ ಮಾರ್ಗ. ಬೇರೆ ಮಾರ್ಗವಿಲ್ಲ, ಬೇರೆ ಮಾರ್ಗವಿಲ್ಲ, ಬೇರೆ ಮಾರ್ಗವಿಲ್ಲ”.
- ಬ್ರಹನ್ನಾರದೀಯ ಪುರಾಣ

ದಯವಿಟ್ಟು ಜಪಿಸಿ

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

ಮತ್ತು ಆನಂದವಾಗಿರಿ.

ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವು